ಪ್ರದೇಶಾಭಿವೃದ್ಧಿ ಯೋಜನೆಗಳು :
ರಾಜ್ಯದ ಕೆಲವೊಂದು ಪ್ರದೇಶಗಳ ಅಂದರೆ ಮಲೆನಾಡು ಪ್ರದೇಶ ಮತ್ತು ಬಯಲುಸೀಮೆ ಪ್ರದೇಶದ ಸಮಗ್ರ ಅಭಿವೃದ್ಧಿಯಲ್ಲಿ ಉಂಟಾದ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರವು ಎರಡು ಸ್ವಾಯತ್ತ ಸಂಸ್ಥೆಗಳನ್ನು ರಚಿಸಿರುತ್ತದೆ. ರಸ್ತೆ ಮತ್ತು ಸೇತುವೆಗಳು, ಗ್ರಾಮೀಣ ಮತ್ತು ನಗರ ನೀರು ಪೂರೈಕೆಗಳು, ಸಣ್ಣ ನೀರಾವರಿ ಕಾಮಗಾರಿಗಳು, ಭೂಸಾರ ಸಂರಕ್ಷಣೆ ಕಾಮಗಾರಿಗಳು ಮತ್ತು ಸಾಮಾಜಿಕ ವಲಯದ ಕಾಮಗಾರಿಗಳು-ಈ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಈ ಪ್ರದೇಶಾಭಿವೃದ್ಧಿ ಮಂಡಳಿಗಳ ಜೊತೆಗೆ ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ, ಅಗತ್ಯತೆಗೆ ಅನುಗುಣವಾಗಿ ಯೋಜನೆಗಳ ವಿವರವಾದ ವರದಿಗಳನ್ನು ಹಾಗೂ ಶಕ್ಯತಾ ವರದಿಗಳನ್ನು ತಯಾರಿಸುವುದಕ್ಕಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗಿದೆ. 2015-16ನೇ ಸಾಲಿನ ಆರ್ಥಿಕ ವರ್ಷದಿಂದ ಮೀನು ಮಾರುಕಟ್ಟೆಗಳು, ಸೇತುವೆಗಳು, ವಾಣಿಜ್ಯ ಸಂಕೀರ್ಣಗಳು, ಸಾರ್ವಜನಿಕ ಸೌಲಭ್ಯಗಳು ಇತ್ಯಾದಿ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರ ನೀಡಲಾಗಿದೆ.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ, ಶಿವಮೊಗ್ಗ :
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯು ಮೇ-1993 ರಲ್ಲಿ ಪ್ರಾರಂಭವಾದಾಗಿನಿಂದ, ಜನವರಿ-2019ರ ಅಂತ್ಯದವರೆಗೆ ರೂ.645.28 ಕೋಟಿಗಳ ವೆಚ್ಚವನ್ನು ಭರಿಸಲಾಗಿದ್ದು, 19978 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ, ಚಿತ್ರದುರ್ಗ:
ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯು 1995 ರಲ್ಲಿ ಪ್ರಾರಂಭವಾದಾಗಿನಿಂದ, ಜನವರಿ-2019ರ ಅಂತ್ಯದವರೆಗೆ ರೂ.289.89 ಕೋಟಿಗಳ ವೆಚ್ಚವನ್ನು ಭರಿಸಲಾಗಿದ್ದು, 7948 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ದಕ್ಷಿಣ ಕನ್ನಡ :
ಕರಾವಳಿ ಅಭಿವೃದ್ಧಿ ಪ್ರಾಧಿಕಾರವು 2008ರಲ್ಲಿ ಪ್ರಾರಂಭವಾದಾಗಿನಿಂದ, ಜನವರಿ-2019ರ ಅಂತ್ಯದವರೆಗೆ ರೂ.49.13 ಕೋಟಿಗಳ ವೆಚ್ಚವನ್ನು ಭರಿಸಲಾಗಿದ್ದು, 180 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ :
ಸರ್ಕಾರವು ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯನ್ನು 2001-02 ರಿಂದ ಅನುಷ್ಟಾನಗೊಳಿಸುತ್ತಿದೆ. ಸ್ಥಳೀಯರ ಆಶೋತ್ತರಗಳನ್ನು ಮತ್ತು ಅಗತ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಈಡೇರಿಸುವ ದೃಷ್ಟಿಯಿಂದ ಹೆಚ್ಚು ಸ್ಪಂದನಶೀಲ ಯೋಜನೆಗಾಗಿ ಮತ್ತು ಸೇವೆಗಳನ್ನು ಒದಗಿಸುವುದಕ್ಕಾಗಿ ಸರ್ಕಾರವು ಬಡವರ ಮತ್ತು ದುರ್ಬಲ ವರ್ಗದವರ ಪ್ರಯೋಜನಕ್ಕಾಗಿ ಆಸ್ತಿಪಾಸ್ತಿಗಳನ್ನು ಸೃಜಿಸುವ, ಮೂಲಸೌಕರ್ಯ ಅಭಿವೃದ್ಧಿಪಡಿಸುವ ಮತ್ತು ಉದ್ಯೋಗವನ್ನು ಸೃಜಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ, ಅವುಗಳನ್ನು ಯೋಜಿಸುವುದು ಮತ್ತು ಅನುಷ್ಠಾನಕ್ಕೆ ತರುವುದನ್ನು ಶಾಸಕರ ಕ್ಷೇತ್ರದ ಮಟ್ಟದಲ್ಲೇ ಮಾಡಬಹುದಾಗಿದೆ. 2018-19ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ.600.00 ಕೋಟಿಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ. ಮಾರ್ಚ್-2019 ರ ಅಂತ್ಯದವರೆಗೆ ರೂ.481.69 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ.
ಹೊಸ ಜಿಲ್ಲೆಗಳ ಅಭಿವೃದ್ಧಿ ಕಾರ್ಯಕ್ರಮ :
ಹೊಸದಾಗಿ ರಚಿಸಲಾದ ಯಾದಗಿರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ವಿಶೇಷ ಅನುದಾನವಾಗಿ ತಲಾ ರೂ.50.00 ಕೋಟಿಗಳನ್ನು ಒದಗಿಸಲಾಗಿದೆ. ರೂ.50.00 ಕೋಟಿಗಳಲ್ಲಿ ಯಾದಗಿರಿ ಜಿಲ್ಲೆಗೆ ಇದುವರೆಗೆ ರೂ.48.85 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಜನವರಿ-2019ರ ಅಂತ್ಯದವರೆಗೆ ರೂ.44.36 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ರೂ.50.00 ಕೋಟಿಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಇದುವರೆಗೆ ರೂ.36.68 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಜನವರಿ-2019ರ ಅಂತ್ಯದವರೆಗೆ ರೂ.34.63 ಕೋಟಿಗಳನ್ನು ವೆಚ್ಚ ಮಾಡಲಾಗಿದೆ.
ನಕ್ಸಲ್ ಭಾದಿತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು :
ನಕ್ಸಲ್ ಬಾಧಿತ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗಾಗಿ 2012-13ನೇ ಸಾಲಿನಿಂದ 2018-19ನೇ ಸಾಲಿನವರೆಗೆ ರೂ.4846.00 ಲಕ್ಷಗಳನ್ನು ಒದಗಿಸಲಾಗಿದೆ. ಈ ಪೈಕಿ, ನಕ್ಸಲ್ ಬಾಧಿತ ಒಂಬತ್ತು ತಾಲ್ಲೂಕುಗಳಾದ ಪಾವಗಡ (ತುಮಕೂರು), ತೀರ್ಥಹಳ್ಳಿ, ಹೊಸನಗರ (ಶಿವಮೊಗ್ಗ), ಶೃಂಗೇರಿ, ಮೂಡಿಗೆರೆ, ಕೊಪ್ಪ(ಚಿಕ್ಕಮಗಳೂರು), ಕಾರ್ಕಳ, ಕುಂದಾಪುರ(ಉಡುಪಿ), ಬೆಳ್ತಂಗಡಿ(ದಕ್ಷಿಣ ಕನ್ನಡ)-ಇವುಗಳಿಗೆ ರೂ.4814.75 ಲಕ್ಷಗಳನ್ನು ಜನವರಿ-2019ರ ಅಂತ್ಯದವರೆಗೆ ಬಿಡುಗಡೆ ಮಾಡಲಾಗಿದೆ.
ಹೈದ್ರಾಬಾದ್ –ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ,ಕಲಬುರಗಿ :
ರಾಜ್ಯದಲ್ಲಿನ ಪ್ರಾದೇಶಿಕ ಅಸಮತೋಲನೆಯನ್ನು ಅಧ್ಯಯಿಸಿ ಅವುಗಳ ನಿವಾರಣೆಗೆ ಕಾರ್ಯತಂತ್ರವನ್ನು ಶಿಫಾರಸ್ಸು ಮಾಡಲು ಪ್ರೊ: ನಂಜುಂಡಪ್ಪ ಅವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ಒಂದು ಉನ್ನತ ಅಧಿಕಾರ ಸಮಿತಿಯನ್ನು ರಚಿಸಿತು. ಸದರಿ ಸಮಿತಿಯು ವಿವಿಧ ವಲಯಗಳಡಿಯಲ್ಲಿನ ಅಭಿವೃದ್ಧಿ ಮಟ್ಟವನ್ನು ಕಂಡು ಹಿಡಿಯಲು 35 ಸೂಚಿಗಳನ್ನು ಗುರುತಿಸಿ ವ್ಯಾಪಕ ಸಮಗ್ರ ಅಭಿವೃದ್ಧಿ ಸೂಚ್ಯಾಂಕ ಹಾಗೂ ಸಂಯುಕ್ತ ದುಃಸ್ಥಿತಿ ಸೂಚ್ಯಾಂಕವನ್ನು ವೃದ್ಧಿಪಡಿಸಿದೆ. ಸಂಯುಕ್ತ ದುಃಸ್ಥಿತಿ ಸೂಚ್ಯಾಂಕವನ್ನು ಆಧರಿಸಿ ಎಲ್ಲಾ ತಾಲ್ಲೂಕುಗಳನ್ನು ಅತ್ಯಂತ ಹಿಂದುಳಿದ, ಅತಿ ಹಿಂದುಳಿದ, ಹಿಂದುಳಿದ ಮತ್ತು ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿರುವ ತಾಲ್ಲೂಕುಗಳಾಗಿ ವರ್ಗೀಕೃತಗೊಳಿಸಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದ ತಾಲ್ಲೂಕುಗಳ ಪೈಕಿ 21 ತಾಲ್ಲೂಕುಗಳನ್ನು ಅತ್ಯಂತ ಹಿಂದುಳಿದ, 5 ತಾಲ್ಲೂಕುಗಳನ್ನು ಅತಿ ಹಿಂದುಳಿದ ಮತ್ತು ಎರಡು ತಾಲ್ಲೂಕುಗಳನ್ನು ಹಿಂದುಳಿದ ತಾಲ್ಲೂಕುಗಳೆಂಬುದಾಗಿ ವರ್ಗೀಕೃತಗೊಳಿಸಿದೆ.
ರಾಜ್ಯದಲ್ಲಿನ ಹಿಂದುಳಿದಿರುವಿಕೆಯ ವಾದಾಂಶವನ್ನು ಪರಿಹರಿಸಲು ರಾಜ್ಯವು 2007-08 ನೇ ಸಾಲಿನಿಂದ ವಿಶೇಷ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನಿಸಲಾಗುತ್ತಿದೆ. ಆಯವ್ಯಯದ ಪ್ರತಿಶತ 40 ರಷ್ಟು ಅನುದಾನವನ್ನು ಹೈದ್ರಾಬಾದ್ ಕರ್ನಾಟಕಕ್ಕೆ ಮೀಸಲಿಡಲಾಗಿದೆ. ಇದಲ್ಲದೆ ದಿನಾಂಕ:22.02.2014ರಂದು ನಿರಸನಗೊಳಿಸಲಾದ ಆಗಿನ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ಸಹ ಈ ಪ್ರದೇಶದ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಅನುಷ್ಟಾನಿಸಲಾಗುತ್ತಿತ್ತು.
ಹೈದ್ರಾಬಾದ್ ಕರ್ನಾಟಕ ಪ್ರದೇಶವು ರಾಜ್ಯದಲ್ಲಿ ಅತಿ ಹಿಂದುಳಿದ ಪ್ರದೇಶವಾಗಿದ್ದು, ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಭಾರತದ ಸಂವಿಧಾನದ ಕಲಂ 371 ವನ್ನು ತಿದ್ದುಪಡಿ ಮಾಡಿ ಸರ್ಕಾರದ ಅಧಿಸೂಚನೆ ದಿನಾಂಕ:06.11.2013 ರನ್ವಯ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ರಚನೆಯಾಗಿದ್ದು, ಕಲಬುರಗಿ ಯನ್ನು ಕೇಂದ್ರ ಸ್ಥಾನವನ್ನಾಗಿ ಮಾಡಲಾಗಿರುತ್ತದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶವು ಬೀದರ್, ಯಾದಗಿರಿ ರಾಯಚೂರು ಕೊಪ್ಪಳ. ಬಳ್ಳಾರಿ ಮತ್ತು ಕಲಬುರಗಿ ಜಿಲ್ಲೆಗಳನ್ನು ಒಳಗೊಂಡಿರುತ್ತದೆ ಹಾಗೂ ಈ ಪ್ರದೇಶವು ರಾಷ್ಟ್ರದ ಎರಡನೇ ಅತಿ ದೊಡ್ಡ ಶುಷ್ಕ ಪ್ರದೇಶವಾಗಿರುತ್ತದೆ. ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಹಿಂದುಳಿವಿಕೆಯನ್ನು ಪರಿಗಣಿಸಿ ಅಸಮತೋಲನವನ್ನು ಹೋಗಲಾಡಿಸುವ ಮುಖ್ಯ ಉದ್ದೇಶದಿಂದ ಮಂಡಳಿ ರಚನೆಗೊಂಡಿದೆ.
ಮಂಡಲಿ:ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಆಸುಇ 50 ಹೈಕಕೋ 2013, ದಿನಾಂಕ:23.01.2014 ರನ್ವಯ 28 ಸದಸ್ಯರನ್ನೊಳಗೊಂಡ ಮಂಡಲಿಯನ್ನು ರಚಿಸಲಾಯಿತು.
ಮಂಡಳಿ ಕಾಯ್ದೆಯ ಅಧ್ಯಾಯ-II ಕಂಡಿಕೆ 3(3) ರಲ್ಲಿ ಮಂಡಲಿಗೆ ನೇಮಕ ಮಾಡುವ ಸದಸ್ಯರುಗಳನ್ನು ಈ ಕೆಳಕಂಡಂತೆ ನಿಗದಿಪಡಿಸಿದೆ.
(ಎ) ಹೈದ್ರಾಬಾದ್ ಕರ್ನಾಟಕ ಪ್ರದೇಶದ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರುಗಳು ಸದಸ್ಯರಾಗಿರುತ್ತಾರೆ ಮತ್ತು ರಾಜ್ಯ ಸರ್ಕಾರವು ಆ ಪ್ರದೇಶದ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಒಬ್ಬರನ್ನು ಅಧ್ಯಕ್ಷರೆಂದು ನಾಮ ನಿರ್ದೇಶಿಸತಕ್ಕದ್ದು;
(ಬಿ) ರಾಜ್ಯ ಸರ್ಕಾರವು ಒಂದು ವರ್ಷದ ಅವಧಿಗಾಗಿ ಸುತ್ತು ಸರದಿಯ ಮೂಲಕ ನಾಮ ನಿರ್ದೇಶಿಸಿದ, ಆ ಪ್ರದೇಶವನ್ನು ಪ್ರತಿನಿಧಿಸುವ, ಕರ್ನಾಟಕ ವಿಧಾನಸಭೆಯ ಎಂಟು ಜನ ಸದಸ್ಯರು;
(ಬಿ1) ರಾಜ್ಯ ಸರ್ಕಾರವು ಒಂದು ವರ್ಷದ ಅವಧಿಗಾಗಿ ಸುತ್ತು ಸರದಿಯ ಮೂಲಕ ನಾಮ ನಿರ್ದೇಶಿಸಿದ, ಆ ಪ್ರದೇಶವನ್ನು ಪ್ರತಿನಿಧಿಸುವ, ಕರ್ನಾಟಕ ವಿಧಾನ ಪರಿಷತ್ತಿನ ಇಬ್ಬರು ಸದಸ್ಯರು;
(ಸಿ) ಮಂಡಳಿಯ ಅಧಿಕಾರ ವ್ಯಾಪ್ತಿಯೊಳಗೆ ಇರುವ ಚುನಾವಣಾ ಕ್ಷೇತ್ರಗಳ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಭಾಗ ಅಥವಾ ಪೂರ್ಣವಾಗಿ ಪ್ರತಿನಿಧಿಸುವ ರಾಜ್ಯ ಸರ್ಕಾರವು ಒಂದು ವರ್ಷದ ಅವಧಿಗಾಗಿ ಸುತ್ತು ಸರದಿಯ ಮೂಲಕ ನಾಮನಿರ್ದೇಶಿಸುವ ಸಂಸತ್ತಿನ ಒಬ್ಬ ಸದಸ್ಯರು.
(ಡಿ) ರಾಜ್ಯ ಸರ್ಕಾರವು ಒಂದು ವರ್ಷದ ಅವಧಿಗಾಗಿ ಸುತ್ತು ಸರದಿಯ ಮೂಲಕ ನಾಮನಿರ್ದೇಶನ ಮಾಡುವ ಬಳ್ಳಾರಿ, ಬೀದರ್, ಗುಲ್ಬರ್ಗಾ, ಯಾದಗಿರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಒಬ್ಬರು ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು;
(ಡಿ1) ರಾಜ್ಯ ಸರ್ಕಾರವು ಸುತ್ತು ವರದಿಯ ಮೂಲಕ ಒಂದು ವರ್ಷದ ಅವಧಿಗಾಗಿ ನಾಮನಿರ್ದೇಶನ ಮಾಡಿದಂತೆ ಆ ಪ್ರದೇಶದೊಳಗೆ ಬರುವ ಒಬ್ಬರು ನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ/ಮೇಯರ್.
(ಇ) (1) ರಾಜ್ಯದ ಯೋಜನಾ ಕಾರ್ಯ ವಿಧಾನ; (2) ರಾಜ್ಯದ ಹಣಕಾಸು ವಿಷಯಗಳು ಮತ್ತು ಲೆಕ್ಕಪತ್ರಗಳು; (3) ನೀರಾವರಿ ಮತ್ತು ಲೋಕೋಪಯೋಗಿ ಕಾಮಗಾರಿಗಳು; (4) ಕೃಷಿ ಮತ್ತು ಕೈಗಾರಿಕೆ; ಹಾಗೂ (5) ಶಿಕ್ಷಣ ಮತ್ತು ಉದ್ಯೋಗ ಈ ಕ್ಷೇತ್ರಗಳಲ್ಲಿ ತಜ್ಞರಾಗಿರುವ ಒಬ್ಬಬ್ಬರಂತೆ ಐವರು ಸದಸ್ಯರು;
ಅನುಚ್ಛೇದ 371(ಜೆ) ಅನುಷ್ಟಾನದ ಪ್ರಕ್ರಿಯೆ
ಅನುಚ್ಛೇದ 371(ಜೆ) ಅನುಷ್ಟಾನದಲ್ಲಿ ಕ್ರಮಗಳ ಸಲಹೆ ಮಾಡಲು ಶ್ರೀ ಹೆಚ್.ಕೆ.ಪಾಟೀಲ್. ಸನ್ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಅಧ್ಯಕ್ಷತೆಯಲ್ಲಿ ಒಂದು ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಯಿತು. ಅನುಚ್ಛೇದ 371(ಜೆ) ಅನುಷ್ಟಾನದ ನಿರ್ವಹಣೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ವಹಿಸಲಾಯಿತು. ತದನಂತರ, ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 07 ಹೈಕಕೋ 2013 (ಭಾಗ-1), ದಿನಾಂಕ:26.08.2014ರನ್ವಯ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ನಿರ್ವಹಿಸಬೇಕೆಂದು ಆದೇಶಿಸಲಾಯಿತು.
ಆಡಳಿತ ವ್ಯವಸ್ಥೆ:
ಸರ್ಕಾರದ ಕಾರ್ಯದರ್ಶಿ ದರ್ಜೆಯ ಸಮಾನಾಂತರ ಹುದ್ದೆಯ ಅಧಿಕಾರಿಯು ಮಂಡಲಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ. ಹಿಂದಿನ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 45 ಹುದ್ದೆಗಳನ್ನು ಹೊಸದಾಗಿ ರಚಿಸಿದ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ವರ್ಗಾಯಿಸಲಾಗಿರುತ್ತದೆ. ಇದಲ್ಲದೆ ವಿವಿಧ ವೃಂದಗಳ 38 ಹುದ್ದೆಗಳನ್ನು ಸರ್ಕಾರದ ಆದೇಶ ಸಂಖ್ಯೆ:ಯೋಇ 02 ಹೈಕವಿ 2014 ದಿನಾಂಕ:03.03.2015 ರನ್ವಯ ಹೊಸದಾಗಿ ಸೃಜಿಸಲಾಗಿದೆ.
ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಅನುಷ್ಠಾನಗೊಳಿಸುವ ಕಾಮಗಾರಿಗಳ ಅನುಷ್ಠಾನದಲ್ಲಿ ತಾಂತ್ರಿಕ/ಆಡಳಿತಾತ್ಮಕ ಅನುಮೋದನೆಯನ್ನು ಶೀಘ್ರಗೊಳಿಸುವ ಹಾಗೂ ಸುಗಮವಾಗಿ ಅನುಷ್ಠಾನಗೊಳಿಸುವ ಹಿತದೃಷ್ಟಿಯಿಂದ ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು, ಲೋಕೋಪಯೋಗಿ ಇಲಾಖೆ, ಕಲಬುರಗಿಯಲ್ಲಿ ನೂತನವಾಗಿ ವಲಯ ಕಚೇರಿಯನ್ನು ಸ್ಥಾಪಿಸಿ ಮುಖ್ಯ ಇಂಜಿನಿಯರ್ ಹುದ್ದೆಯನ್ನು ಸೃಜಿಸಲಾಗಿದೆ. ಮಂಡಲಿಯ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಎಲ್ಲಾ ಇಲಾಖೆಗಳ ಅವಶ್ಯಕ ತಾಂತ್ರಿಕ ಅನುಮೋದನೆಯನ್ನು ನೀಡುವ ಅಧಿಕಾರವನ್ನು ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು(ಈಶಾನ್ಯ), ಲೋಕೋಪಯೋಗಿ ಇಲಾಖೆ, ಕಲಬುರಗಿ ಇವರಿಗೆ ವಹಿಸಲಾಗಿದೆ.